ತೀಯೋಡೋಷಿಯಸ್

 	ಇತಿಹಾಸದಲ್ಲಿ ಈ ಹೆಸರಿನ ಇಬ್ಬರು ರೋಮನ್ ಚಕ್ರವರ್ತಿಗಳೂ ಒಬ್ಬ ಬಿeóÁಂಟಿನ್ ಚಕ್ರವರ್ತಿಯೂ ಇದ್ದಾರೆ. 

	ತೀಯೋಡೋಷಿಯಸ್ I : 347-395. ಈತ 379-395ರಲ್ಲಿ ರೋಮನ್ ಚಕ್ರವರ್ತಿಯಾಗಿದ್ದವ. ಸ್ಪೇನಿನ ವಾಯವು ಭಾಗದಲ್ಲಿರುವ ಗೆಲೀಷಿಯ ಪ್ರದೇಶದ ಕಾವುಕ ಎಂಬಲ್ಲಿ ಶ್ರೀಮಂತ ಜಮೀನುದಾರ ಕುಟುಂಬವೊಂದರಲ್ಲಿ ಜನಿಸಿದ. ಇವನೊಬ್ಬ ಸ್ಪೇನಿಗ, ಇವನ ತಂದೆಯ ಹೆಸರೂ ತೀಯೋಡೋಷಿಯಸ್ ಎಂದೇ. ಆತ ರೋಮನ್ ಚಕ್ರವರ್ತಿ 1ನೆಯ ವ್ಯಾಲೆಂಟಿನಿಯನನ (321-375) ಕೈಕೆಳಗೆ ಉನ್ನತ ಅಧಿಕಾರಿಯಾಗಿದ್ದ. ಸ್ಯಾಕ್ಸನರೂ ಪಿಕ್ಟರೂ ಸ್ಕಾಟರೂ ಗೆದ್ದು ಕೊಂಡಿದ್ದು ಬ್ರಿಟಿನ್ನನ್ನು 367-369 ರಲ್ಲಿ ಮತ್ತೆ ಜಯಿಸಿದ್ದನಲ್ಲದೆ ಮೀಷಿಯದಿಂದ ಸಾರ್ಮೇಷಿಯನರನ್ನು 371ರಲ್ಲಿ ಹೊಡೆದೋಡಿಸಿದ ; ಆಫ್ರಿಕದಲ್ಲಿ ಎದ್ದಿದ್ದ ದಂಗೆಯನ್ನಡಗಿಸಿದ (375). ಆದರೆ ಹಿರಿಯ ತೀಯೋಡೋಷಿಯಸನನ್ನು ವ್ಯಾಲೆಂಟಿನಿಯನನೋ ಅವನ ಮಗ ಗ್ರೀಷಿಯನನೋ ಮರಣದಂಡನೆಗೆ ಗುರಿ ಮಾಡಿದ. ಇದಕ್ಕೆ ಕಾರಣವೇನೆಂಬುದು ಗೊತ್ತಾಗಿಲ್ಲ. ಸಾರ್ಮೇಷಿಯನರ ವಿರುದ್ಧ ಯುದ್ಧದಲ್ಲಿ (374) ಶೌರ್ಯವನ್ನು ಮೆರೆದಿದ್ದ ಕಿರಿಯ ತೀಯೋಡೋಷಿಯಸ್ ತನ್ನ ತಂದೆಯ ಮರಣ ದಂಡನೆಯಿಂದಾಗಿ ಸ್ಪೇನಿನಲ್ಲಿದ್ದ ತನ್ನ ನಿವಾಸಕ್ಕೆ ಮರಳಿದ. 376ರಲ್ಲಿ ಈಲಿಯ ಫ್ಲಾಸಿಲ ಎಂಬವಳನ್ನು ಮದುವೆಯಾದ. 1ನೆಯ ವ್ಯಾಲೆಂಟಿನಿಯನನ ಸೋದರನೂ ಪೂರ್ವ ರೋಮನ್ ಚಕ್ರವರ್ತಿಯೂ ಆಗಿದ್ದ ವೇಲೆನ್ಸ್ 378ರಲ್ಲಿ ವಿಸಿಗಾತರಿಂದ ಸೋತು ಹರನಾದ ಮೇಲೆ ಗೇಷಿಯನ್ ತೀಯೋಡೋಷಿಯಸನನ್ನು ಆಹ್ವಾನಿಸಿ, 379ರ ಜನವರಿ19ರಂದು ಇವನನ್ನು ಸರ್ಮಿಯಮ್‍ನಲ್ಲಿ ಚಕ್ರವರ್ತಿಯೆಂದು ಘೋಷಿಸಿದ. ಗ್ರೇಷಿಯನನಿಗೆ ಇವನ ಹೆಸರನ್ನು ಸೂಚಿಸಿದವರು ಯಾರೆಂಬುದು ತಿಳಿಯದು. ವಿಸಿಗಾತರ ದಾಳಿಗೆ ತುತ್ತಾಗಿದ್ದ ಡ್ಯಾನ್ಯೂಬಿಯನ್ ಪ್ರಾಂತ್ಯಗಳಲ್ಲಿ ಶಾಂತಿ ನೆಮ್ಮದಿ ನೆಲಸುವಂತೆ ಮಾಡುವುದು ತೀಯೋಡೋಷಿಯಸನ ಮೊದಲನೆಯ ಕೆಲಸವಾಗಿತ್ತು. 382ರಲ್ಲಿ ಇವನು ವಿಸಿಗಾತರೊಂದಿಗೆ ಶಾಂತಿಯ ಒಪ್ಪಂದಕ್ಕೆ ಸಹಿ ಹಾಕಿದ. ತೀಯೋಡೋಷಿಯಸನ ಸಾಮ್ರಾಜ್ಯದ ಗಡಿಯೊಳಗೆ ಬಾಲ್ಕನ್ ಪರ್ವತಗಳಿಗೂ ಡ್ಯಾನ್ಯೂಬ್ ನದಿಗೂ ನಡುವಣ ಪ್ರದೇಶದಲ್ಲಿ ಗಾತರು ತಮ್ಮದೇ ಆದ ಆಡಳಿತ ಹೊಂದಿರಲು ಈ ಒಪ್ಪಂದದಿಂದ ಅವಕಾಶವಾಯಿತು. 

	ತೀಯೋಡೋಷಿಯಸನಿಗೆ ಕ್ಯಾತೊಲಿಕ್ ಧರ್ಮದಲ್ಲಿ ವಿಶೇಷ ಆಸಕ್ತಿಯಿತ್ತು. ಅವನು ರೋಮನ್ ಚಕ್ರವರ್ತಿಗಳ ಹಳೆಯ ಪೇಗನ್ ಧರ್ಮದ ಬಿರುದಾದ ಪಾಂಟಿಫೆಕ್ಸ್ ಮ್ಯಾಕ್ಸಿಮಸ್ ಎಂಬುದನ್ನು ತ್ಯಜಿಸಿದನಲ್ಲದೆ, ತನ್ನ ಚಕ್ರಾಧಿಪತ್ಯದ ಎಲ್ಲ ಪ್ರಜೆಗಳೂ ಪ್ರಾಚೀನ ನೈಸೀಯ ನಗರದಲ್ಲಿ ಸೇರಿದ್ದ ಧರ್ಮಸಭೆಯಲ್ಲಿ (325) ಪ್ರತಿಪಾದಿತವಾದ ಸಿದ್ಧಾಂತಗಳನ್ನು ಒಪ್ಪಬೇಕೆಂದೂ ಆಜ್ಞೆ ಹೊರಡಿಸಿದ. ಇವಕ್ಕೆ ವಿರೋಧವಾಗಿದ್ದ ಏರಿಯನರು, ಮನಿಚೆಯನರು ಮತ್ತು ಪೇಗನರು ಖಂಡನೆಗೆ ಒಳಗಾದರು. ಇವನ ಕ್ರಮಗಳಿದಾಗಿ ಏರಿಯನ್ ಧರ್ಮ ಕ್ಷೀಣದೆಸೆಗೆ ಒಳಗಾಯಿತು. 

	ಗ್ರೇಷಿಯನನನ್ನು ಕೊಲೆಮಾಡಿ ಪಶ್ಚಿಮದಲ್ಲಿ ಚಕ್ರಾಧಿಪತಿಯಾದ (383) ಮ್ಯಾಗ್ನಸ್ ಮ್ಯಾಕ್ಸಿಮಸನನ್ನು ಇವನು ಮರ್ದಿಸಿ 389ರಲ್ಲಿ ರೋಮಿಗೆ ಭೇಟಿ ನೀಡಿದನಲ್ಲದೆ, ತೆಸ್ಸಲೋನಿಕದಲ್ಲಿ ದಂಗೆ ಸಂಭವಿಸಿದಾಗ 3,000 ಜನರನ್ನು ನಿರ್ದಯೆಯಿಂದ ಕೊಲ್ಲಿಸಿದ. ಇವನ ಕ್ರೌರ್ಯವನ್ನು ಮಿಲಾನಿನ ಸೇಂಟ್ ಅಂಬ್ರೋಸ್ ಖಂಡಿಸಿದನಲ್ಲದೆ ಇವನು ತನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದರೆ ಇವನನ್ನು ನೋಡುವುದಿಲ್ಲವೆಂದು ಹೇಳಿದ. ತೀಯೋಡೋಷಿಯಸ್ ಪೇಗನ್ ಮತದ ಮೇಲಣ ತನ್ನ ದ್ವೇಷವನ್ನು ಮುಂದುವರಿಸಿ ಅದನ್ನು ಹತ್ತಿಕ್ಕುವ ಪ್ರಯತ್ನವನ್ನು ಮುಂದುವರಿಸಿದ. 392ರಲ್ಲಿ 2ನೆಯ ವ್ಯಾಲೆಂಟಿನಿಯನ್ ಅನಿರೀಕ್ಷಿತವಾಗಿ ತೀರಿಕೊಂಡಾಗ, ಅವನ ಸೇನಾಧಿಪತಿಗಳಲ್ಲೊಬ್ಬನಾದ ಅರ್ಬೊಗಾಸ್ಟ್ ಎಂಬವನು ದಂಗೆಯೆದ್ದು ಯೂಜಿನಿಯಸ್ ಎಂಬ ರೋಮನ್ ಪ್ರಾಧ್ಯಾಪಕನನ್ನು ಚಕ್ರವರ್ತಿಯಾಗಿ ಮಾಡಿದ. ಯೂಜಿನಿಯಸ್ ಕ್ರೈಸ್ತನಾದರೂ ಅರ್ಬೊಗಾಸ್ಟ್ ಪೇಗನ್. ಆದ್ದರಿಂದ ಇದು ಪೇಗನ್ ವಿಜಯವೇ ಆಯಿತು. 394ರಲ್ಲಿ ತೀಯೋಡೋಷಿಯಸ್ ಅವನ್ನು ಸೋಲಿಸಿದ. ಯೂಜಿನಿಯಸ್‍ನನ್ನು ಕೊಲ್ಲಲಾಯಿತು. ಅರ್ಬೊಗಾಸ್ಟ್ ಆತ್ಮಹತ್ಯೆ ಮಾಡಿಕೊಂಡ. 395ರಲ್ಲಿ ತೀಯೋಡೋಷಿಯಸ್ ತೀರಿಕೊಂಡ. ಅವನ ಅನಂತರ ರೋಮನ್ ಚಕ್ರಾಧಿಪತ್ಯವನ್ನು ಪೂರ್ವ ಮತ್ತು ಪಶ್ಚಿಮ ಸಾಮ್ರಾಜ್ಯಗಳಾಗಿ ವಿಭಾಗಿಸಲಾಯಿತು. ಪೂರ್ವ ಚಕ್ರಾಧಿಪತ್ಯಕ್ಕೆ ತೀಯೋಡೋಷಿಯಸನ ಮಕ್ಕಳಲ್ಲೊಬ್ಬನಾದ ಆರ್ಕೇಡಿಯಸನೂ ಪಶ್ಚಿಮ ರೋಮನ್ ಚಕ್ರಾಧಿಪತ್ಯಕ್ಕೆ ಇನ್ನೊಬ್ಬ ಮಗನಾದ ಹೊನೋರಿಯಸನೂ ಚಕ್ರವರ್ತಿಗಳಾದರು. 

	ತೀಯೋಡೋಷಿಯಸ್ II : 401-450 ಪೂರ್ವ ರೋಮನ್ ಚಕ್ರವರ್ತಿ (408-450). ಆರ್ಕೇಡಿಯಸ್ ಮತ್ತು ಯುಡಾಕ್ಸಿಯರ ಮಗ. 402ರಲ್ಲಿ ಅಗಸ್ಟಸ್ ಎಂದು ಇವನಿಗೆ ಕಿರೀಟಧಾರಣೆಯಾಯಿತು. 408ರಲ್ಲಿ ಇವನ ತಂದೆ ಮೃತಪಟ್ಟಾಗ ಇವನು ಪೂರ್ವ ಚಕ್ರಾಧಿಪತ್ಯದ ಏಕೈಕ ಅಧಿಪತಿಯಾದ. ಈತ ಪ್ರಾಪ್ತ ವಯಸ್ಕನಾಗಿಲ್ಲದ್ದರಿಂದ ಆಂತೆಮಿಯೆಸ್ ಈತನ ಪ್ರತಿನಿಧಿಯಾಗಿ ಮೊದಲು ಆಡಳಿತ ನಡೆಸಿದ. ಸೋದರಿ ಪುಲ್ಕೀರಿಯಳು ಮೊದಲು ಆಗಸ್ಟಾ ಆಗಿ ಅನಂತರ ತನ್ನ ತಮ್ಮನ ಪ್ರತಿನಿಧಿಯಾದಳು. ತೀಯೋಡೋಷಿಯಸನನ್ನು ಸರಿಯಾಗಿ ಬೆಳೆಸಲು ಆಕೆ ಶ್ರಮಿಸಿದಳು. ಕಾಲಕ್ರಮದಲ್ಲಿ ಇವನು ಶ್ರದ್ಧಾಳುವೂ ಸಜ್ಜನನೂ ದೇವತಾಶಾಸ್ತ್ರದಲ್ಲಿ ಆಸಕ್ತನೂ ಆದ. 

	ಇವನ ಆಳ್ವಿಕೆಯ ಕಾಲದಲ್ಲಿ ಪೂರ್ವ ರೋಮನ್ ಚಕ್ರಾಧಿಪತ್ಯ ಅನೇಕ ಕಠಿನ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಆಫ್ರಿಕದಲ್ಲಿ ಆಕ್ರಮಣ ಯುದ್ಧಗಳಲ್ಲಿ ಇವನಿಗೆ ಸೋಲಾಯಿತು. ಹೂಣರು ಡ್ಯಾನ್ಯೂಬ್ ಪ್ರದೇಶದ ಮೇಲೆ ಆಕ್ರಮಣ ನಡೆಸಿದರು. ಕಾನ್‍ಸ್ಟಾಂಟಿನೋಪಲಿನ ಕೋಟೆಯ ಪುನರ್ನಿರ್ಮಾಣ (447) ಕಾನ್‍ಸ್ಟಾಂಟಿನೋಪಲ್ ವಿಶ್ವವಿದ್ಯಾಲಯದ ಸ್ಥಾಪನೆ (425), ತೀಯೋಡೋಷಿಯನ್ ನ್ಯಾಯಸಂಹಿತೆಯ ಪ್ರಕಟಣೆ (438) - ಇವು ಈತನ ಆಳ್ವಿಕೆಯ ಕಾಲದ ಕೆಲವು ಸಾಧನೆಗಳು. ಇವನು 450ರಲ್ಲಿ ತೀರಿಕೊಂಡ. 								(ಎಚ್.ಎಂ.ಎನ್.ಆರ್.) 

	ತೀಯೋಡೋಷಿಯಸ್ III : 715-717 ರಲ್ಲಿ ಬಿeóÁಂಟಿನ್ ಚಕ್ರವರ್ತಿಯಾಗಿದ್ದವ. 717ರ ಅನಂತರ ತೀರಿಕೊಂಡ. ನೈಋತ್ಯ ಏಷ್ಯ ಮೈನರ್ ಪ್ರದೇಶದಲ್ಲಿ ಅನಾಮಿಕನಾದ ತೆರಿಗೆ ಅಧಿಕಾರಿಯಾಗಿದ್ದ ಇವನನ್ನು ಚಕ್ರವರ್ತಿಯೆಂದು, 2ನೆಯ ಅನಾಸ್ಟೇಷಿಯಸನ ವಿರುದ್ಧ ದಂಗೆಯೆದ್ದ ಸೈನ್ಯದವರು ಘೋಷಿಸಿದರು. ಇಷ್ಟವಿಲ್ಲದಿದ್ದರೂ ಇವನು ಚಕ್ರವರ್ತಿಯಾದ. ಇವನ ಬೆಂಬಲಿಗರು ಆರು ವರ್ಷ ಕಾಲ ಕಾನ್ ಸ್ಟಾಂಟಿನೋಪಲಿನ ಮುತ್ತಿಗೆ ನಡೆಸಿ ಅನಸ್ಟೇಷಿಯನನ್ನು ಪದಚ್ಯುತಗೊಳಿಸಿದರು. ತೀಯೋಡೋಷಿಯಸನಿಗೆ ಚಕ್ರವರ್ತಿಯಾಗಿ ಆಳುವ ಅರ್ಹತೆ ಇರಲಿಲ್ಲ. ಆನಟೋಲಿಕನ್ ಸೈನ್ಯದ ದಂಡನಾಯಕ 3ನೆಯ ಲೀಯೊ ಇವನನ್ನು ಸಿಂಹಾಸನದಿಂದ ಇಳಿಸಿ (717) ತಾನೇ ಚಕ್ರವರ್ತಿಯಾದ. ತೀಯೋಡೋಷಿಯಸ್ ಕ್ರೈಸ್ತಮಠವೊಂದರಲ್ಲಿ ಪ್ರಾಣತ್ಯಾಗ ಮಾಡಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ